ಆಕಳ ಹಾಡು

ತಾಯ್‌ ಹೊಟ್ಟಿ ತಂಗಾಲಿ ತಾಯಿರಲಿ ದ್ರೌಪತಿ |
ನೀಲಗೊಂಡೇದ ನಿರವೀರ | ಬಾಲನ ಮ್ಯಾಲ |
ಶ್ರೀರಾಮರಿದ್ದಾ ರೊಂದಗಲಾದೆ ||೧||

ಎಂದೀಗಿ ಈ ಹಾಡ ಹೊಂದಿಸ್ತಿದ್ದಾರೆಂದು |
ಅಂಗಳಕ ಬಂದು ತಿರಗೀನೆ | ಹ್ವಾದವರು |
ಹಾಳು ದೇಗುಲದ ಕದವಾಗೆ ||೨||

ಎಂದೀಗಿ ಈ ಹಾಡ ಹೊಂದಿಸ್ತಿದ್ದಾರೆಂದು |
ಬಾಗಿಲಿಗಿ ಬಂದು ತಿರಿಗೀನೆ | ಹ್ವಾದವರು |
ಹಾಳೆ ಹಿತ್ತಲದ ಕದವಾಗೆ ||೩||
* * *
ಪಟ್ಟೋಳಿ ಗುಡಿ ತಂದು ಕಟ್ಟ್ಯಾರ ನಡುಮನಿ |
ಸುತ್ತ ಸಾರುಽವ ಹೊಳೆಯುಽವ | ಗುಡಿಗೋಳು |
ಕಟ್ಯಾರ ಬವಲಿ ನಡುಮನಿಯ ||೪||

ರೊಕ್ಕಸ್ತ ಗುಡಿ ತಂದು ಕಟ್ಟ್ಯಾರ ನಡುಮನಿ |
ಸುತ್ತ ಸಾರುಽನ ಹೊಳೆಯುಽವ | ಗುಡಿಗೋಳು |
ಕಟ್ಟ್ಯಾರ ಬವಲಿ ನಡುಮನಿಯ ||೫||

ತಟ್ಟಾನೆ ಈ ಕಾಲ ತಪ್ಪಾನೆ ತೊಯ್ದಾವ |
ಮುತ್ತ ಸುರದಂಗ ಬೆವತಾಳ | ಬವಲಿ ತಾ|
ಪುತ್ರಽನ ಈಗ ಹಡದಾಳ ||೬||

ತಟ್ಟಾನೆ ಈ ಕಾಲ ತಪ್ಪಾನೆ ತೊಯ್ದಾವ |
ಹವಳ ಸುರಿದಂಗ ಬೆವತಾಳ | ಬವಲಿ ತಾ|
ಕಂದಽನ ಈಗ ಹೆಡೆದಾಳ ||೭||

ಉಚ್ಚಾಯ ದಿನದಲ್ಲಿ ದಡ್ಡಿಽಯ ಉಡುಗೂಸಿ |
ಉಪ್ಪ ಅಂಬೀಲ ಕರಿಯ ಬೇವನೆ ತರಿಸಿ|
ಕೆಂಚಽಲ ಮ್ಯಾಲ ಇಳವ್ಯಾರ ||೮||

ಹಾಲಾನೆ ತರಸ್ಯಾರ ಗಿಣ್ಣಾನೆ ಕಾಸ್ಯಾರ |
ತಂದಿಟ್ಟರ ರುಸಿಯ ನಡುಮನಿಯ |
ಬಾಳಿಽಯ ಎಲಿ ಹಾಸಿ ಆಳ ಗೌವಳರಲ್ಲಾ |
ಉಂಡಾರ ಗಿಣ್ಣ ಜನರೆಲ್ಲಾ | ಸರುರೆಲ್ಲಾ |
ಬಾಲನ ತಾಯಿ ಸುಖಿನಿರಽ ||೯||

ನಿಂಬಿಽಯ ಎಲಿ ಹಾಸಿ ಇಂದರ ಗೌವಳರೆಲ್ಲಾ |
ಉಂಡಾರ ಗಿಣ್ಣ ಒನೆರೆಲ್ಲಾ | ಸರುರೆಲಾ |
ಕಂದಽನ ತಾಯಿ ಸುಖಿನಿರಽ ||೧೦||

ಅತ್ತಿಽಯ ಎಲಿ ಹಾಸಿ ಸುತ್ತಿನ ಗೌವಳರೆಲ್ಲಾ |
ಉಂಡಾರ ಗಿಣ್ಣ ಒನರೆಲ್ಲಾ ಸರುರೆಲ್ಲಾ |
ಪುತ್ರನ ತಾಯಿ ಸುಖಿನಿಽ ||೧೧||

ಮುತ್ತಿಽನ ಆರುಽತಿ ಮುನಿಯ ತಂದೆತ್ತೀದಾ|
ಲಕ್ಷಽಣವಂತಿ ಗುಣವಂತಿ! ಬವಲಿ ತಾ|
ಹೊಕ್ಕೊಮ್ಮೆ ಬಾರ ಹೊಲಗೋಳ ||೧೨||

ಬರದ ಬತ್ತಿಸಿದಂತಾ ಕರಚೆಲುವಿ ಬವಲಿ ತಾ |
ತೊರದ ಹಿಮ್ಮಾಲಿ ಕೆಲಕು ಹೊತ್ತಲಿ ತನ್ನ |
ಪರದಕ್ಷದಿಂದ ನಡದಾಳ ||೧೩||

ಮುಂದ ಹಿಂಡಽನ್ಹಾಕಿ ಹಿಂದ ತಾ ಆಗ್ಯಾಳ |
ಹಿಂಗೆಚ್ಚಲವ್ವ ಬಳಲ್ದೇವಿ | ಬನಲಿ ತಾ|
ಹ್ವಾದಾಳ ಬಾವಂಜಿ ಬನದಾಽಗ ||೧೪||

ಒಳಿಯ ಒಳಿಯಾಽಕ್ಹೋಗಿ ಹೊಡಿಯ ಹುಲ್ಲನೆ ಮೆಯ್ದು |
ಹಿರಿದೊಂದು ಕಿರಿದೊಂದು ತೆನಿಯ ಹುಲ್ಲನೆ ಮೆಯ್ದು |
ಕೆಂಚಽಲ ತುಂಬಿ ಬಿಗಿದಾಽವ ||೧೫||

ಒಳೆಯ ಒಳಿಯಾಽಕ್ಹೋಗಿ ಹೊಡಿಯ ಹುಲ್ಲನೆ ಮೆಯ್ದು |
ಒಪ್ಪುಳ್ಳ ಕೊಡವ ತಿಳಿಯ ನೀರನೆ ಕುಡಿದು |
ಕೈೆಂಚಽಲ ತುಂಬಿ ಬಿಗಿದಾಽವ ||೧೬||

ಮುಂದ ಹಿಂಡನ್ಹಾಕಿ ಹಿಂದ ತಾ ಆದಾಽಳ |
ಏರೊಮ್ಮಿ ಇಳಿದು ಬರುವಾಗ |
ನಾರಿ ಕಂಡಾಳೆ ಹುಲಿಗೋಳ ||೧೭||

ಎಲ್ಲೀದು ಹುಲ್ಲೀದು ಎಲ್ಲೀದು ನೀರಿಽದು |
ಎಲ್ಲೆನ್ನ ಇದಿಯು ಎಳೆದೆನ್ನ ತಂದೀತು |
ಕಂದಽನ ಇಂದು ಅಗಲೀವ ||೧೮||

ಎತಲೀದು ಹುಲ್ಲೀದು ಎತಲೀದು ನೀರಿಽದು |
ಎತಲೆನ್ನ ಇದಿಯು ಎಳೆದೆನ್ನ ತಂದೀತು |
ಪುತ್ರಽನ ಇಂದ ಅಗಲೀವ ||೧೯||

ಬಾಲಽಗ ಮಲಿಕೊಟ್ಟು ಬಂದೀನು ನಾ ಈಗ |
ಬಾಳಿಽಯ ಬನದ ತನವಿನಲ್ಲಾಡಂತ |
ಬಾಲಯ್ಯನಾಣಿ ಹುಸಿಯಲ್ಲ ||೨೦||

ಕಂದಽಗ ಮೊಲಿಕೊಟ್ಟು ಬಂದೀನು ನಾ ಈಗ |
ನಿಂಬಿಽಯ ಬನದ ತನವಿನಲ್ಲಾಡಂತ |
ಕಂದಯ್ಯನಾಣಿ ಹುಸಿಯಲ್ಲ ||೨೧||

ಪುತ್ರಽಗ ಮೊಲಿಕೊಟ್ಟು ಬಂದೀನು ನಾ ಈಗ |
ಅತ್ತಿಽಯ ಬನದ ತನವಿನಲ್ಲಾಡಂತ |
ಪುತ್ರೈಯ್ಯನಾಣಿ ಹುಸಿಯಲ್ಲ ||೨೨||
* * *

ಅಕ್ಕತಂಗೆರು ನೀವು ಒಪ್ಪಿಲಿ ಬರುವುದು ಕಂಡು |
ನನ್ನ ಕೋಮಾರ ಅರಬಕ್ಷಿ ಪರಬಕ್ಷಿ |
ಒಬ್ಬರೊಂದೀನ ಮಲಿಗೊಳ್ಳಽ ||೨೩||

ತಾಯಿ ಮಕ್ಕಳ ನೀವು ಚ್ಯಾಯಲೆ ಬರುವುದು ಕಂಡು |
ನನ್ನ ಕೋಮಾರ ಅರಬಕ್ಷಿ ಪರಬಕ್ಷಿ |
ಒಬ್ಬರೊಂದೀನ ಮಲಿಗೊಳ್ಳಽ ||೨೪||
* * *

ಬೇಲಿಮ್ಯಾಲೀನ್ಹುಲ್ಲ ಚಾಯದಲೆಯ್ದಾವೆಂದು|
ಹೋಗಿ ಮೆಲಿಬ್ಯಾಡ ಬಾಲ ಮಲ್ಲಿಗಿ ನಿನ್ನ|
ನಾಲೀಗ್ಗಿ ಮುಳ್ಳ ಮುರದಾಽವ ||೨೫||

ಹುತ್ತಿನ ಮ್ಯಾಲೀನ್ಹುಲ್ಲ ಹಚ್ಚಗೆಯ್ದಾವೆಂದು|
ಹೋಗಿ ಮೆಲಿಬ್ಯಾಡ ಬಾಲಮಲ್ಲಿಗಿ ನಿನ್ನ|
ಕುತ್ತೀಗಿ ಸರಪ ಹರದಾಽವ ||೨೬||

ಭಾಂವಿ ಮ್ಯಾಲಿನ ಹುಲ್ಲ ಚಾಯದಲೆಯ್ದಾನೆಂದು |
ಹೋಗಿ ಮೆಲಿಬ್ಯಾಡೊ ಬಾಲಮಲ್ಲಿಗಿ ನಿನ್ನ |
ಕಾಲ ಜಾರಿದರ ಮುಣಗೀಯೊ ||೨೭||

ಇಷ್ಟನೆಲ್ಲಾ ಹೇಳಿ ನೀ ಎಲ್ಲೋಗುತಿ ತಾಯಿ|
ನೀ ಹ್ವಾದಲಿ ನಾನು ಬರುವೆಽನ|
ನೀ ಹ್ವಾದಲಿ ನಾನು ಬರುವೆಽನ ಅಂದರ
ದಾವೂಣಿ ಕುಣಕಿ ಸಡಲ್ಯಾವ ||೨೮||

ಮುಂದೆ ಹಿಂಡಽನ್ಹಾಕಿ ಹಿಂದ ತಾನಾದಾಳ|
ಹಿಂಗೆಚ್ಚಲವ್ವ ಬಳಲ್ದೇವಿ| ಬವಲಿ ತಾ|
ಹ್ವಾದಾಳ ಬಾವಂಜಿ ಬನದಾಗ ||೨೯||

ಮಲಗಿರುವ ಹುಲಿರಾಜನ ತೊಡಿ ಬಡೆದು ಎಬ್ಬಽಸಿ|
ಅನ್ಯಽವನಾಡದೆ ಕರತಿನ್ನಽ|
ನನ್ನವ್ವ ನನ ತಾಯಿ ನಾ ನಿನ್ನ ತಿನಲಾರ
ಇನ್ನಾರ ತಿಂಗಳುಪ್ಪಾಸ ||೩೦||

ಹುಲಿರಾಜ ಬಳಲ್ದೇವಿ ಏಕಾಂತ ಮಾತಾಡಾಗ|
ಊದೂವ ಶಂಖ ಹೆರಿ ಕಾಳಿ ಬಂದಾವ|
ಖ್ಯಾತೆ ಬಳಲ್ದೇವಿ ಇದಿರ್ಗೊಳ್ಳ ||೩೧||
*****

ಕಥೆಯ ಹಾಡುಗಳು

ರಾಜ ರಾಣಿಯರ ಕಥೆಗಳು, ಜಕಣಿಯರ ಕಥೆಗಳು ಮುಂತಾದ ಜಾನಪದ ಕಥಾಸಾಹಿತ್ಯದ ಪರಿಚಯವಿಲ್ಲದವರಾರಾದರೂ ಉಂಟೆ? ಅಂತಹ ಕಥೆಗಳೇ ಹೆಣ್ಣುಮಕ್ಕಳ ಹಾಡುಗಳಿಗೂ ವಿಷಯವಾಗಿ ಅವರ ಜೀವನದ ರಥಕ್ಕೆ ನೆರವುಗೋಲಿನಂತೆ ಸಹಾಯಕವಾಗಿರುತ್ತದೆ. ಕೆಲಸಬೊಗಸೆ ಮಾಡುವಾಗ ಅವರು ಇಂತಹ ಕಥಾಗೀತಗಳನ್ನು ಹಾಡುತ್ತ ತಮ್ಮ ದುಡಿತದ ಶ್ರಮವನ್ನು ಮರೆಯುವರು. ಅಲ್ಲದೆ ಅವರ ಜೀವನದೆ ಕಷ್ಟನಷ್ಟಗಳಿಗೆ ಎದೆಗೊಡುವ ಬಲವನ್ನು ಇವುಗಳೇ ಅವರಿಗೆ ಪೂರಯಿಸುವವು. ಸದ್ಯದ ಶ್ರಮವನ್ನು ಮರೆಯಿಸುವುವು. ನಾಳಿನ ಚಿಂತೆಯನ್ನು ಬಯಲು ಮಾಡುವವು. ಅದಕ್ಕೆಂತಲೇ ಇಂತಹ ಜದಪದ ಸಾಹಿತ್ಯಕ್ಕೆ ಜೀವನದ ಸಾಹಿತ್ಯವೆಂದು ಎನ್ನುವುದು. `ಜೀವನಸಂಗೀತ’ `ಜೀವನಶ್ರುತಿ’ ಮುಂತಾದ ಹೆನರುಗಳೆಲ್ಲ ಇಂತಹೆ ಸಾಹಿತ್ಯಕ್ಕೇ ಸಲ್ಲತಕ್ಕವುಗಳು.

ಆಕಳ ಹಾಡು

ಇದು ಒಂದು ಆಶ್ರಮದೊಳಗಿನ ಆಕಳ ಹಾಡು. ಅಡವಿಯಲ್ಲಿ ಮೇಯಲಿಕ್ಕೆ ಹೋದಾಗ ಹುಲಿಯ ಕೈಗೆ ಸಿಕ್ಕು- “ಮಗುವಿಗೆ ಮೊಲೆಕೊಟ್ಟು ಬರುವೆನೆಂ”ದು ಆಣೆಯಿಟ್ಟುಕೊಂಡು, ವಚನಕೊಟ್ಟಂತೆ ತಿರುಗಿ ಅದು ಹುಲಿಯ ಬಾಯಿಗೆ ತುತ್ತಾಗಲು ಹೋದ ಕಥೆ ಇದರಲ್ಲಿದೆ. ಮೊದಲನೆಯ ನುಡಿಯಲ್ಲಿ `ತಾಯಿಯು ತಣ್ಣಗಿದ್ದರೆ ಮಗುವಿನ ಬೆನ್ನ ಮೇಲೆ ಮಹಾದೇವ’ ಎಂಬ ಮಾತಿನಲ್ಲಿ ಕಥಾಸೂಚನೆಯನ್ನು ಹೇಳಿದೆ. ಮುಂದಿನ ಎರಡು ನುಡಿಗಳಲ್ಲಿ ಹಾಡು ಕೇಳಲಿಕ್ಕೆ ಬಂದವರು ಮರಳಿಹೋಗಬಾರದೆಂದು ಶಾಪವಿದೆ. ಅದರ ಮುಂದಿನ ಎರಡು ನುಡಿಗಳಲ್ಲಿ ಈಯುವ ಆಕಳಿಗೆ ಪರದೆಗಳನ್ನು ಮರೆಮಾಡಿದ ವರ್ಣನೆಯಿದೆ. ಆ ಮೇಲಿನ ಎರಡು ನುಡಿಗಳಲ್ಲಿ ಹೆರಿಗೆಯ ವರ್ಣನೆ. ಅದರ ಮುಂದಿನ ಒಂದು ನುಡಿಯಲ್ಲಿ ಹೆರಿಗೆಯ ನಂತರದ ಕ್ರಿಯೆಯನ್ನು ಹೇಳಿದೆ. ಬಳಿಕ ನಾಲ್ಕು ನುಡಿಗಳಲ್ಲಿ ಆ ಆಕಳ ಹಾಲಿನ ಗಿಣ್ಣವನ್ನುಂಡು ನೆರೆಯ ಜನರೆಲ್ಲ ಹರಕೆಯನ್ನು ಕೊಟ್ಟ ಮಾತು ಹೇಳಿದೆ. ಮುಂದಿನ ಎರಡು ನುಡಿಯಲ್ಲಿ ಆಶ್ರಮದ ಋಷಿಯು ಆಕಳಿಗೆ ಆರತಿಯೆತ್ತಿ ಅದನ್ನು ಅಡವಿಗೆ ಮೇಯಲು ಬಿಡುತ್ತಾನೆ. ಆ ಮೇಲಿನ ಐದುನುಡಿಗಳಲ್ಲಿ ಅಡವಿಗೆ ಹೋಗಿ ಮೇಯ್ದು ಹೊರಳಿ ಬರುವಾಗ ಹುಲಿಯ ಕೈಗೆ ಸಿಕ್ಕ ವಿಷಯವು ಹೇಳಿದೆ. ಮುಂದಿನ ಎರಡು ನುಡಿಗಳಲ್ಲಿ ಹುಲಿಗೆ ವಚನವನ್ನು ಕೊಡುತ್ತದೆ. ಆ ಮೇಲೆ ಎರಡು ನುಡಿಗಳಲ್ಲಿ ಆಕಳು ವಿಧಿಯನ್ನು ಹಳಿಯುತ್ತದೆ. ಅದರ ಮುಂದಿನ ಮೂರು ನುಡಿಗಳಲ್ಲಿ ಜೊತೆ ಆಕಳುಗಳಿಗೆ ತನ್ನ ಪರದೇಶಿ ಮಗನ ಮೇಲೆ ಲಕ್ಷ್ಯವಿರಲೆಂದು ಬಿನ್ನವಿಸಿ ಕೊಳ್ಳುತ್ತದೆ. ಮುಂದಿನ ಮೂರು ನುಡಿಗಳಲ್ಲಿ ತನ್ನ ಮಗುವಿಗೆ ಬುದ್ಧಿವಾದವನ್ನು ಹೇಳುತ್ತದೆ. ಕೊನೆಯ ನಾಲ್ಕು ನುಡಿಗಳಲ್ಲಿ ಕಥಾಪರಿಸಮಾಪ್ತಿಯಾಗುತ್ತದೆ.

ಶಬ್ದಪ್ರಯೋಗಗಳು:-ತಂಗಾಲಿ=ತಣ್ಣಗಿರಲಿ(?). ನಿರವೀರ=ನಿಲವಿನ(?). ಪಟ್ಟೋಳಿ ಗುಡಿ=ರೇಶಿಮೆಯ ಪರದೆ. ಬವಲಿ=ಕಪಿಲೆ (ಆಕಳು). ರೊಕ್ಕಸ್ತ=ಬೆಲೆಯುಳ್ಳ. ಉಚ್ಚಾಯ=ಉತ್ಸವ. ದಡ್ಡಿ=ದನಗಳ ಹಕ್ಕೆ. ಗೌವಳರು=ದನಗಾಹಿಗಳು. ಬರದ ಬತ್ತಿಸಿದಂತಾ=ಚಿತ್ರದಂತೆ ಸುಂದರವಾದ. ಹಿಮ್ಮಲಿ=ಹಿಮ್ಮೊಲೆ. ಕೆಲಕೂತ=ತೂಗಾಡಿಸುತ್ತ. ಪರದಕ್ಷದಿಂದ=ಗಂಭೀರವಾಗಿ. ಬಳಲ್ದೇವಿ=ಬಳಲಿದವಳು. ಬಾವಂಜಿ=ಒಂದು ಬಗೆಯ ಗಿಡಗಂಟಿ. ಇದಿ=ವಿಧಿ. ಬಂದೀನು=ಬಂದೇನು. ತನವಿನಲ್ಲಿ=ತಂಪಿನಲ್ಲಿ. ಅರಬಕ್ಷಿ ಪರಬಕ್ಷಿ=ಬುದ್ದಿ ಬಲಿಯದ. ಮಲೆಗೊಳ್ಳ-ಮೊಲೆಗೊಡಿರಿ. ಛಾಯದಲೆ=ಒಪ್ಬಿನಿಂದ. ದಾವುಣಿ=ಗೋದಲೆ (ಮೇವಿನ ಹರಿ). ಕುಣಕಿ ಸಡಲ್ಯಾವ=ಕಟ್ಟುವ ಹಗ್ಗಕ್ಕೆ ಎರವಾದೀ, ಎಂದರೆ ಸತ್ತೀ ಎಂದರ್ಥ. ಅನ್ಯಾವನಾಡದೆ=ಮರುಮಾತು ಹೇಳದೆ. ಉಪ್ಪಾಸ=ಉಪವಾಸ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೀರುತ್ತಿರುವುದು ಇಂಧನವಲ್ಲ
Next post ಯುವಪೀಳಿಗೆ ಎತ್ತ ಸಾಗಿದೆ?

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys